ಉದಯಕುಮಾರ್: 1935-85. ರಂಗಭೂಮಿ ಮತ್ತು ಚಲನಚಿತ್ರನಟ, ಚಿತ್ರನಿರ್ದೇಶಕ ಹಾಗೂ ಸಾಹಿತಿ. ಆನೇಕಲ್ಲು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ 1935 ಮಾರ್ಚ್ 16ರಂದು ಜನಿಸಿದರು. ತಂದೆ ಶಾನುಭೋಗ ಶ್ರೀನಿವಾಸಯ್ಯ, ತಾಯಿ ಶಾರದಮ್ಮ. ಇವರ ಮೊದಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ಪ್ರೌಢಶಾಲೆಯ ಹಂತದವರೆಗೂ ವ್ಯಾಸಂಗ ಮಾಡಿರುವ ಇವರು ಸಂಸ್ಕೃತವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದರು. 1951ರಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಬೆಂಗಳೂರಿನ ಸರ್ವೋದಯ ಇಲಾಖೆಯಲ್ಲಿ ಸಾಹಿತ್ಯ ವಿಭಾಗದ ಕಾರ್ಯದರ್ಶಿಯಾಗಿ ಒಂದು ವರ್ಷ (1954), ಆನೇಕಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿ ಕೊನೆಗೆ ಆ ಕೆಲಸವನ್ನು ಬಿಟ್ಟು ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಚಾರ ಭಾಷಣಗಳನ್ನು ಮಾಡುವುದರಲ್ಲಿ ನಿರತರಾದರು. ನಟಿ ಬಿ.ಜಯಮ್ಮನವರ ಪರಿಚಯವಾಗಿ, ಅವರ ಮೂಲಕ ಗುಬ್ಬಿ ನಾಟಕ ಕಂಪೆನಿಯನ್ನು ಪ್ರವೇಶಿಸಿದ ಉದಯ ಕುಮಾರ್ ಪ್ರಾರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ಅನಂತರ ಕುರುಕ್ಷೇತ್ರ ನಾಟಕದಲ್ಲಿ ಪರಶುರಾಮನ ಪಾತ್ರವನ್ನು ಅಭಿನಯಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರಲ್ಲದೆ. ನಾಟಕ ಕಂಪನಿಯ ಮಾಲೀಕರಾಗಿದ್ದ ಗುಬ್ಬಿವೀರಣ್ಣನವರ ಮೆಚ್ಚುಗೆಗೂ ಪಾತ್ರರಾದರು. ಅನಂತರ ಚಿತ್ರರಂಗವನ್ನು ಪ್ರವೇಶಿಸಿದ ಇವರು ಅಭಿನಯಿಸಿದ ಮೊದಲ ಚಿತ್ರ ಭಾಗ್ಯೋ ದಯ (1956).   ಸೇಡಿಗೆಸೇಡು ಇವರ ಅಭಿನಯದ ನೂರನೆಯ ಚಿತ್ರ. ತಮ್ಮ ಅಭಿನಯನೈಪುಣ್ಯ ಮತ್ತು  ಶ್ರದ್ಧೆಗಳಿಂದ ಪಾತ್ರಗಳನ್ನು ನಿರ್ವಹಿಸಿ ಚಿತ್ರರಂಗದಲ್ಲಿ ಬಹು ಬೇಗ ಜನ ಪ್ರಿಯರಾದರು. ಚಂದವಳ್ಳಿಯ ತೋಟದ ಶಿವನಂಜೇಗೌಡ, ವಿಜಯ ನಗರದ ವೀರಪುತ್ರದ ಕೃಷ್ಣದೇವರಾಯ, ರಾಮಾಂಜನೇಯ ಯುದ್ಧದ ಆಂಜನೇಯ ಈ ಪಾತ್ರಗಳು ಇವರ ಉನ್ನತ ಕಲಾಭಿನಯಕ್ಕೆ ಸಾಕ್ಷಿಯಾಗಿವೆ. ಇವರ ಅಭಿನಯವಿರುವ ಭಕ್ತಕನಕ ದಾಸ, ನಂದಾದೀಪ, ಸಂತತುಕಾರಾಂ, ಅಮರಶಿಲ್ಪಿ ಜಕಣಾಚಾರಿ, ಸತ್ಯಹರಿಶ್ಚಂದ್ರ, ಮಿಸ್ ಲೀಲಾವತಿ, ಸಂಧ್ಯಾರಾಗ ಮತ್ತು ಬಂಗಾರದ ಹೂ ಈ ಚಿತ್ರಗಳು ರಾಷ್ಟ್ರಪ್ರಶಸ್ತಿಗಳಿಸಿವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸಿ ಆ ಭಾಷೆಗಳ ಚಿತ್ರಪ್ರೇಮಿಗಳಿಗೂ ಇವರು ಪರಿಚಿತರಾಗಿದ್ದಾರೆ. ಕನ್ನಡದಲ್ಲಿ ಸ್ವತಂತ್ರವಾಗಿ ಇದೇ ಮಹಾಸುದಿನ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಉದಯಕುಮಾರ್ ಅವರಿಗೆ 1964ರಲ್ಲಿ ರಾಷ್ಟ್ರಪ್ರಶಶಸ್ತಿ ಲಭಿಸಿತು. ಮದರಾಸಿನ ಪಿsಲಂ ಫ್ಯಾನ್ಸ್‌ ಅಸೋಸಿಯೇಷನ್ ಇವರಿಗೆ ಶ್ರೇಷವಿನಟ ಎಂಬ ಬಿರುದನ್ನಿತ್ತು ಗೌರವಿಸಿದೆ. ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಇವರಿಗೆ ಸನ್ಮಾನಿಸಿವೆ. ಕನ್ನಡದ ಕುಮಾರ ತ್ರಯರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದ ಇವರು 1985ರಲ್ಲಿ ಅಕಾಲಿಕವಾಗಿ ನಿಧನ ಹೊಂದಿದರು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ